ಚನ್ನಪಟ್ಟಣ - 
ಕರ್ನಾಟಕ ರಾಜ್ಯದಲ್ಲಿ ಬೆಂಗಳೂರು ಜಿಲ್ಲೆಯ ಪಶ್ಚಿಮದ ಒಂದು ತಾಲ್ಲೂಕು; ಆ ತಾಲ್ಲೂಕಿನ ಕಸಬಾ (ಆಡಳಿತ ಕೇಂದ್ರ). ತುಮಕೂರು ಜಿಲ್ಲೆಯ ಕುಣಿಗಲ್, ಬೆಂಗಳೂರು ಜಿಲ್ಲೆಯ ರಾಮನಗರ ಮತ್ತು ಕನಕಪುರ, ಮಂಡ್ಯ ಜಿಲ್ಲೆಯ ಮಳವಳ್ಳಿ ಮತ್ತು ಮದ್ದೂರು ತಾಲ್ಲೂಕುಗಳು ಚನ್ನಪಟ್ಟಣ ತಾಲ್ಲೂಕನ್ನು ಸುತ್ತವರಿದಿವೆ.ಕಸಬಾ, ಮಳೂರು, ವಿರೂಪಾಕ್ಷಿ ಪುರ 3 ಹೋಬಳಿಯನ್ನು ಹೊಂದಿವೆ. ತಾಲ್ಲೂಕಿನ ವಿಸ್ತೀರ್ಣ 543ಚ.ಕಿ.ಮೀ ಜನಸಂಖ್ಯೆ 2,52,563 (2001).

ತಾಲ್ಲೂಕಿನ ಉತ್ತರ ಭಾಗ ಬೆಟ್ಟಗಳಿಂದ ಕೂಡಿದೆ. ದಕ್ಷಿಣ ಭಾಗ ಮೈದಾನ. ಈ ಭಾಗದಲ್ಲಿ ಹಳ್ಳಿಗಳು ಹೆಚ್ಚು. ಇಲ್ಲಿ ಹಲವು ದೊಡ್ಡ ಕೆರೆಗಳಿವೆ. ತಾಲ್ಲೂಕಿನ ಮುಖ್ಯ ನದಿ ಕಣ್ವಾ. ಇದು ಮಳೂರಿನ ಉತ್ತರಕ್ಕೆ ಸ್ವಲ್ಪ ದೂರದಲ್ಲಿ ಬೆಟ್ಟಗಳಿಂದ ಜಿಗಿದು ವಿಶಾಲವೂ ಫಲವತ್ತೂ ಆದ ಕಣಿವೆ ಪ್ರದೇಶದಲ್ಲಿ ಹರಿಯುತ್ತದೆ. ಅಬ್ಬೂರಿನ ಬಳಿ ಈ ನದಿಗೆ ಅಣೆಕಟ್ಟನ್ನು ಕಟ್ಟಿ ಹಲವು ಕೆರೆಗಳಿಗೆ ಇದರಿಂದ ನೀರನ್ನು ಒದಗಿಸಲಾಗಿದೆ.

ಚನ್ನಪಟ್ಟಣ ತಾಲ್ಲೂಕಿನ ಮಣ್ಣು ವೈವಿಧ್ಯಮಯವಾದ್ದು. ತಾಲ್ಲೂಕಿನ ಹಲವು ಕಡೆ, ನೀರಿನ ಆಸರೆ ಇರುವಲ್ಲಿ, ಬತ್ತ, ಕಬ್ಬು, ಬಾಳೆ, ತೆಂಗು, ಅಡಕೆ ಮಾವು ಬೆಳೆಯುತ್ತವೆ. ಕಣ್ವಾ ನದಿಯ ಕೆಳದಂಡೆಗಳ ಮೇಲೆ ತೆಂಗಿನ ತೋಟಗಳು ಸುಂದರವಾಗಿ ಹಬ್ಬಿವೆ. ಇಲ್ಲಿಯ ಮಣ್ಣು ತೆಂಗಿನ ಬೆಳೆಗೆ ತುಂಬ ಪ್ರಶಸ್ತವಾದ್ದು. ನೀರಿನ ಸೌಕರ್ಯ ಹೆಚ್ಚಾಗಿಲ್ಲದ ಎಡೆಗಳಲ್ಲಿ ರಾಗಿ, ಜೋಳ ಮುಂತಾದವನ್ನು ಬೆಳೆಯುತ್ತಾರೆ. ರೇಷ್ಮೆ ಹುಳುಗಳನ್ನು ಸಾಕುವುದೂ ಎಲೆ ತೆಗೆಯುವುದೂ ತಾಲ್ಲೂಕಿನ ಜನರ ಒಂದು ಮುಖ್ಯ ಕಸಬು, ರೇಷ್ಮೆ ಹುಳುಗಳಿಗೆ ಆಹಾರವಾದ ಉಪ್ಪು ನೇರಳೆ ಇಲ್ಲಿ ಬೆಳೆಯುತ್ತದೆ. ರೇಷ್ಮೆ ವ್ಯವಸಾಯಕ್ಕೆ ಇಲ್ಲಿಯ ಹವಾಮಾನ ತುಂಬ ಅನುಕೂಲಕರವಾದ್ದು. ತಾಲ್ಲೂಕಿನ ಹಲವು ಎಡೆಗಳಲ್ಲಿ ಹತ್ತಿ ಬಟ್ಟೆ ನೇಯುತ್ತಾರೆ.

ಚನ್ನಪಟ್ಟಣದ ಇತಿಹಾಸವನ್ನು ಸುಮಾರು ಹದಿನಾರು ಶತಮಾನಗಳಷ್ಟು ಹಿಂದಿನಿಂದ ಗುರುತಿಸಬಹುದು. ಪುರಾಣಗಳ ಸಂಗತಿಗಳೊಂದಿಗೂ ಚನ್ನಪಟ್ಟಣದ ಹೆಸರು ಹೆಣೆದುಕೊಂಡಿದೆ. ಕೃತಯುಗದಲ್ಲಿ ವಿಜಯಪಾಲರೂ ತ್ರೇತಾಯುಗದಲ್ಲಿ ಕಣ್ವ ಮಹರ್ಷಿಗಳೂ ದ್ವಾಪರದಲ್ಲಿ ಲಂಬಕರ್ಣರೂ ಕಲಿಯುಗದ ವಿಜ್ಞಾನೇಶ್ವರರೂ ಇಲ್ಲಿದ್ದರೆಂದು ಜನರ ನಂಬಿಕೆ. ಸುಂದರ ತಾಣವಾದ ಚನ್ನಪಟ್ಟಣಕ್ಕೆ ವ್ಯಾಸತೀರ್ಥರ ಕಾಲದಲ್ಲಿ ಚೆಂದಪಟ್ಟಣವೆಂದು ಹೆಸರಾಯಿತೆಂದೂ ಅನಂತರ ಇದು ಚನ್ನಪಟ್ಟಣ ಎಂದಾಯಿತೆಂದೂ ಹೇಳಲಾಗಿದೆ.
ಚನ್ನಪಟ್ಟಣ ತಾಲ್ಲೂಕಿನ ಪ್ರದೇಶ ಗಂಗ ರಾಜ್ಯಕ್ಕೆ ಸೇರಿತ್ತು. ಇದರ ಪಶ್ಚಿಮ ಭಾಗ ಚಿಕ್ಕ ಗಂಗವಾಡಿಯ ಭಾಗವಾಗಿತ್ತು. ಅದರ ಮುಖ್ಯಪಟ್ಟಣ ಹೊಂಗನೂರು, ಚೋಳ ದೊರೆಗಳ ಕಾಲದಲ್ಲಿ ಮಾಲೂರು ಪಟ್ಟಣ ಮತ್ತು ಕೊಡಲೂರು ಮುಖ್ಯ ಸ್ಥಳಗಳಾಗಿದ್ದುವು. ಅನಂತರ ಈ ಪ್ರದೇಶ ಹೊಯ್ಸಳರ ಆಳ್ವಿಕೆಗೆ ಒಳಪಟ್ಟಿತ್ತು. ಮೂರನೆಯ ಪೆನುಗೊಂಡ ಯುದ್ಧದಲ್ಲಿ ಅಸಾಧಾರಣ ಶೌರ್ಯ ಪ್ರದರ್ಶಿಸಿದ ಜಗದೇವರಾಯನ ಸೇವೆಯನ್ನು ಮೆಚ್ಚಿ ಶ್ರೀರಂಗರಾಯ ಇವನಿಗೆ ಘನಗಿರಿ ರಕ್ಷಕನೆಂಬ ಬಿರುದನ್ನೂ ಚನ್ನಪಟ್ಟಣ ಸೀಮೆಯನ್ನೂ ಕೊಟ್ಟನಲ್ಲದೆ ತನ್ನ ಮಗಳನ್ನು ಜಗದೇವರಾಯನ ಮಗನಿಗೆ ಕೊಟ್ಟು ಮದುವೆ ಮಾಡಿದನೆಂದು ಹೇಳಲಾಗಿದೆ. ಜಗದೇವರಾಯ ಚನ್ನಪಟ್ಟಣವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದ, ಜಗದೇವರಾಯನ ಮರಣದ ಆನಂತರ ಅವನ ಮಗ ಕುಮಾರ ಜಗದೇವರಾಯ ಆಳಿದ. 1630ರಲ್ಲಿ ಮೈಸೂರಿನ ಅರಸರು ಚನ್ನಪಟ್ಟಣವನ್ನು ಆಕ್ರಮಿಸಿಕೊಂಡರು.

ಕನ್ನಡ ಬಾಲಬೋಧೆ ಮೊದಲ್ಗೊಂಡು ಅನೇಕ ಕನ್ನಡ ಕೃತಿಗಳನ್ನು ರಚಿಸಿದ ಚ. ವಾಸುದೇವಯ್ಯನವರೂ ಕಥೆ ನಾಟಕ ವಿಮರ್ಶೆ ಮುಂತಾದ ನಾನಾ ಸಾಹಿತ್ಯ ಪ್ರಕಾರಗಳಲ್ಲಿ ಕೃತಿರಚನೆ ಮಾಡಿ ಆಧುನಿಕ ಕನ್ನಡ ಸಾಹಿತ್ಯವನ್ನು ಸಮೃದ್ಧಿಗೊಳಿಸಿದ ಸಿ.ಕೆ. ವೆಂಕಟರಾಮಯ್ಯನವರೂ ಚನ್ನಪಟ್ಟಣದವರು, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿರುವ ಸಾಹಿತಿ ದೇ.ಜವರೇಗೌಡರು ಈ ತಾಲ್ಲೂಕಿನ ಚಕ್ಕೆರೆ ಗ್ರಾಮದವರು. ತಾಲ್ಲೂಕಿನ ಕಸಬೆಯಾಗಿರುವ ಚನ್ನಪಟ್ಟಣ ಬೆಂಗಳೂರಿಗೆ ನೈಋತ್ಯದಲ್ಲಿ, ಬೆಂಗಳೂರು-ಮೈಸೂರು ರಸ್ತೆಯಲ್ಲಿ, ಉ.ಅ. 120 28' ಮತ್ತು ಪೂ.ರೇ. 770 13' ಮೇಲಿದೆ. ಬೆಂಗಳೂರು-ಮೈಸೂರು ರೈಲುಮಾರ್ಗ ಈ ಊರನ್ನು ಹಾದುಹೋಗುತ್ತದೆ. ಜನಸಂಖ್ಯೆ 63,561 (2001).

ಇಲ್ಲಿಯ ಕೋಟೆಯನ್ನು 1580ರಲ್ಲಿ ಜಗದೇವರಾಯ ಕಟ್ಟಿಸಿರಬೇಕು. 1630ರಲ್ಲಿ ಚಾಮರಾಜ ಒಡೆಯರು ಬಹುಕಾಲ ಮುತ್ತಿಗೆ ಹಾಕಿ ಇದನ್ನು ವಶಪಡಿಸಿಕೊಂಡರು. 1759ರಲ್ಲಿ ಮರಾಠಾ ಸೇನೆ ಇದರ ಸುಮಾರು ಅರ್ಧ ಭಾಗವನ್ನು ನಾಶಪಡಿಸಿತು. ಆ ಮುತ್ತಿಗೆಯನ್ನು ಹೈದರ್ ಆಲಿ ನಿವಾರಿಸಿದ. ದಿವಾನ್ ಪೂರ್ಣಯ್ಯ ಇದನ್ನು ದುರಸ್ತುಗೊಳಿಸಿದ. ಈ ಕೋಟೆಯ ಸ್ವಲ್ಪ ಭಾಗ ಮಾತ್ರ ಉಳಿದಿದೆ.

ಪಟ್ಟಣದ ದಟ್ಟವಾದ ಜನವಸತಿಯಿರುವುದು ಶುಕ್ರವಾರ ಪೇಟೆಯಲ್ಲಿ. ಇದು ಕೋಟೆ ಪ್ರದೇಶದ ಈಶಾನ್ಯಕ್ಕೆ ಇದೆ. ಮೃದುವಾದ ಆಲೆಮರದಿಂದ ಜಗತ್ಪ್ರಸಿದ್ಧವಾದ ಬಣ್ಣದ ಸಾಮಾನುಗಳು ತಯಾರಾಗುವುದು ಇಲ್ಲಿ. ಇವು ಎಂದಿಗೂ ಹೊರ ದೇಶಗಳಿಗೆ ರಪ್ತು ಆಗುತ್ತವೆ. ವೀಣೆಯ ತಂತಿಗಳೂ, ಗಾಜಿನ ಬಳೆಗಳೂ ಹಿಂದೆ ಇಲ್ಲಿ ತಯಾರಾಗುತ್ತಿದ್ದುವು. ಈಗ ಅವಕ್ಕೆ ಬೇಡಿಕೆ ಇಲ್ಲವಾದ್ದರಿಂದ ಆ ಕೈಗಾರಿಕೆಗಳು ನಶಿಸಿವೆ. 

ಪೇಟೆಯ ಉತ್ತರಕ್ಕೆ ಎರಡು ಮುಸ್ಲಿಂ ಗೋರಿಗಳ ಪೈಕಿ ಒಂದು ಟಿಪ್ಪುವಿನ ಧಾರ್ಮಿಕ ಗುರುವಾಗಿದ್ದ ಅಕಿಲ್ ಷಾ ಕಾದ್ರಿಯದು. ಇನ್ನೊಂದು, ಟಿಪ್ಪುವಿನ ಬೆಂಗಳೂರು ಸೈನ್ಯದ ದಳಪತಿ ಸೈಯಿದ್ ಇಬ್ರಾಹಿಂನದು. ಟಿಪ್ಪುವಿನಿಂದ ಬಂಧನಕ್ಕೆ ಒಳಗಾಗಿದ್ದ ಇಂಗ್ಲಿಷಿರ ಬಗ್ಗೆ ಅನುಕಂಪ ತೋರಿಸಿದನೆಂದು ಈತ ಪ್ರಸಿದ್ಧನಾಗಿದ್ದಾನೆ. ಕೋಟೆಯ ಆಂಜನೇಯ ಸ್ವಾಮಿ ಮತ್ತು ವರದರಾಜಸ್ವಾಮಿ ದೇವಾಲಯಗಳು, ಪೇಟೆಯ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನ-ಇವುಗಳಲ್ಲದೆ ಚನ್ನಪಟ್ಟಣದಲ್ಲಿ ಮಸೀದಿಗಳೂ, ಚರ್ಚುಗಳೂ ಇವೆ. ಪೇಟೆ ಪ್ರದೇಶದಲ್ಲಿ ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿದ್ದಾರೆ. ಚನ್ನಪಟ್ಟಣದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳೂ ಜೂನಿಯರ್ ಕಾಲೇಜು ಅಲ್ಲದೆ ಕರ್ನಾಟಕ ರಾಜ್ಯ ಪೋಲೀಸ್ ತರಬೇತು ಶಾಲೆ, ತಾಂತ್ರಿಕ ಶಿಕ್ಷಣ ಶಾಲೆ ಮತ್ತು ಗ್ರಾಮೀಣ ಕರಕುಶಲಿಗಳ ತರಬೇತು ಕೇಂದ್ರ ಇವೆ. ಸ್ಪನ್ ರೇಷ್ಮೆ ಕಾರ್ಖಾನೆ ಇಲ್ಲಿಯ ದೊಡ್ಡ ಕೈಗಾರಿಕೆ. ತೆಂಗಿನ ತೋಟಗಳ ಮಡಿಲಿನಂತಿರುವ ಚನ್ನಪಟ್ಟಣ ತನ್ನ ಹೆಸರನ್ನು ಸಾರ್ಥಕ ಪಡಿಸಿಕೊಂಡಿದೆ. ಇದಕ್ಕೊಂದು ಪುರಸಭೆಯುಂಟು. ಇದೊಂದು ವ್ಯಾಪಾರ ಸ್ಥಳ.

ಚನ್ನಪಟ್ಟಣದ ಉತ್ತರಕ್ಕೆ ಐದು ಮೈ. ದೂರದಲ್ಲಿ ಕಣ್ವ ನದಿಯ ದಡದಲ್ಲಿರುವ ಅಬ್ಬೂರು ಮಾಧ್ವ ಕೇಂದ್ರ. ಇಲ್ಲಿ ಶ್ರೀ ಬ್ರಹ್ಮಣ್ಯತೀರ್ಥರ ಬೃಂದಾವನ ಇದೆ. ಇವರ ಗುರುಗಳಾದ ಪುರುಷೋತ್ತಮ ತೀರ್ಥರು ಇದರ ಬಳಿಯಲ್ಲಿ ಸಶರೀರವಾಗಿ ಗುಹಾ ಪ್ರವೇಶ ಮಾಡಿದರೆಂದು ಹೇಳಲಾಗಿದೆ. ವ್ಯಾಸರಾಯರು ಇಲ್ಲೇ ನೆಲಸಿದ್ದರೆಂದೂ ಶ್ರೀಪಾದರಾಯರು ತಮ್ಮ ಬಾಲ್ಯವನ್ನು ಇಲ್ಲೇ ಕಳೆದರೆಂದೂ ತಿಳಿದುಬರುತ್ತದೆ.

ಚನ್ನಪಟ್ಟಣದ ಪಶ್ಚಿಮಕ್ಕೆ ಒಂದೂವರೆ ಮೈ. ದೂರದಲ್ಲಿರುವ ಗ್ರಾಮ ಮಳೂರು. ಹಿಂದೆ ಇದಕ್ಕೆ ರಾಜೇಂದ್ರ ಸಿಂಹ ನಗರ ಎಂಬ ಹೆಸರಿತ್ತೆಂದೂ ಸಾರಂಗಧರನಿಗೆ ಇಲ್ಲಿ ಕೈಗಳು ಮೊಳೆತುದರಿಂದ ಈ ಸ್ಥಳಕ್ಕೆ ಮೊಳತೂರು ಎಂಬ ಹೆರು ಬಂತೆಂದೂ ಹೇಳಲಾಗಿದೆ. ಇಲ್ಲಿ ಅಪ್ರಮೇಯ ಸ್ವಾಮಿಯ ದೇವಸ್ಥಾನವಿದೆ. ಪುರಂದರ ದಾಸರು ಈ ದೇವರು ಸ್ತುತಿಸಿದ್ದಾರೆ. ಜಗದೇವರಾಯ ಈ ದೇವಸ್ಥಾನಕ್ಕೆ ಪ್ರಾಕಾರ ಕಟ್ಟಿಸಿದ.

ಮಾನಕುಂದ ಒಂದು ಇತಿಹಾಸ ಪ್ರಸಿದ್ಧ ಸ್ಥಳ. ಇದು ಚನ್ನಪಟ್ಟಣಕ್ಕೆ 6 ಮೈಲಿ ದೂರದಲ್ಲಿದೆ. ಇದಕ್ಕೆ ಹಿಂದೆ ಮಾಕುಂದ ಎಂಬ ಹೆಸರಿತ್ತು. ಇದು ಗಂಗ ವಶದ ಭೂವಿಕ್ರಮ ಮತ್ತು ಶಿವಮಾರರ ರಾಜಧಾನಿಯಾಗಿತ್ತು. ಚೋಳರ ದಾಳಿಗೆ ತುತ್ತಾಗಿತ್ತು. ಜಗದೇವರಾಯನ ತಮ್ಮ ಯುವರಾಜ ಅಂಕುಶರಾಯ ಇಲ್ಲಿ ಸ್ವಲ್ಪ ಕಾಲ ಇದ್ದ.

ಹೊಂಗನೂರು ಚನ್ನಪಟ್ಟಣದ ದಕ್ಷಿಣಕ್ಕೆ 5 ಮೈ. ದೂರದಲ್ಲಿದೆ. ಇದು ಗಂಗರ ಕಾಲದಲ್ಲಿ ಚಿಕ್ಕ ಗಂಗವಾಡಿಯ ಮುಖ್ಯ ಪಟ್ಟಣವಾಗಿತ್ತು. ಅನಂತರ ಹೊಯ್ಸಳ ರಾಜ್ಯಪಾಲ ಇಲ್ಲಿ ವಾಸಿಸುತ್ತಿದ್ದ. 

ಕೂಡಲೂರು ಕಣ್ವ ನದಿಯ ಎಡದಂಡೆಯಲ್ಲಿರುವ ಗ್ರಾಮ. ಚನ್ನಪಟ್ಟಣಕ್ಕೆ 4 ಮೈ. ದೂರದಲ್ಲಿದೆ. ಚೋಳರ ಕಾಲದಲ್ಲಿ ಇದು ರಾಜರಾಜಚತುರ್ವೇದಿ ಮಂಗಳ ಎನಿಸಿಕೊಂಡಿತ್ತು. ಹೈದರಾಲಿ ಈ ಗ್ರಾಮವನ್ನು ಫಕೀರನೊಬ್ಬನಿಗೆ ಇನಾಂ ಕೊಟ್ಟನೆಂದು ಹೇಳಲಾಗಿದೆ. 

ಚನ್ನಪಟ್ಟಣದ ಉತ್ತರಕ್ಕೆ 8 ಮೈ. ದೂರದಲ್ಲಿ ನಿರ್ಮಿಸಲಾಗಿರುವ ಕಣ್ವ ಜಲಾಶಯ ಒಂದು ಪ್ರೇಕ್ಷಣೀಯ ಸ್ಥಳ. ಇದರ ಬಲನಾಲೆ ಉದ್ದ 15 ಮೈ. ಎಡನಾಲೆಯದು 7 ಮೈ. ಇವುಗಳ ಅಚ್ಚುಕಟ್ಟು ಅನುಕ್ರಮವಾಗಿ 2400 ಮತ್ತು 800 ಎಕರೆಗಳು.

ನಾಗವಾರ, ಮೈಲನಾಯಕನಹಳ್ಳಿ, ಮಂಗಳವಾರಪೇಟೆ, ಅಕ್ಕೂರು, ಇಗ್ಗಲೂರು, ಸೋಗಲ, ಚಕ್ಕರೆ, ಬೇವೂರು-ಇವು ತಾಲ್ಲೂಕಿನ ಇತರ ಕೆಲವು ಗ್ರಾಮಗಳು. ತಾಲ್ಲೂಕನ್ನು ಮೂರು ಹೋಬಳಿಗಳಾಗಿ ವಿಂಗಡಿಸಲಾಗಿದೆ. ತಾಲ್ಲೂಕಿನಲ್ಲಿ ಒಟ್ಟು 145 ಗ್ರಾಮಗಳಿವೆ.										(ವಿ.ಜಿ.ಕೆ.; ಎ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ